ಬಂಗಡೆ
	ಸ್ಕಾಂಬ್ರಿಡೆ ಕುಟುಂಬಕ್ಕೆ ಸೇರಿದ ರಾಸ್ಟ್ರಲಿಜರ್ ಕನಗುರ್ತಾ, ರಾ. ಬ್ರಾಕಿಸೋಮಾ, ರಾ. ಫ್ಯುಗೇಟಾ, ಪ್ರಭೇದದ ಮೀನುಗಳಿಗಿರುವ ಸಾಮಾನ್ಯ ಹೆಸರು. ಆಂಗ್ಲ ಭಾಷೆಯ ಸಾಮಾನ್ಯ ನಾಮ ಮ್ಯಾಕರಲ್. ಮೊದಲನೆಯ ಪ್ರಬೇಧ ಇಂಡಿಯನ್ ಮ್ಯಾಕರಲ್ ಎಂದೇ ಪ್ರಸಿದ್ಧಿ. ಈ ಮೀನುಗಳು ಹಿಂದೂ ಮಹಾಸಾಗರ, ಪಶ್ಚಿಮ ಶಾಂತಿ ಮಹಾ ಸಾಗರ ಪ್ರಾಂತ್ಯದಲ್ಲಿ ಹಂಚಿಕೆಯಾಗಿವೆ. ಆಫ್ರಿಕಾ ಖಂಡದ ಕರಾವಳಿ, ಕೆಂಪು ಸಮುದ್ರ ಮತ್ತು ಪರ್ಷಿಯನ್ ಗಲ್ಫ್, ಪಾಕಿಸ್ಥಾನ, ಭಾರತ, ಶ್ರೀಲಂಕಾ, ಬಾಂಗ್ಲಾ ದೇಶ, ಬರ್ಮಾ, ತೈಲಾಂಡ್, ಮಲೇಶಿಯಾ, ಕ್ಯಾಂಬೋಡಿಯಾ, ಇಂಡೋನೇಶಿಯಾ, ಉತ್ತರ ಆಸ್ಟ್ರೇಲಿಯಾ, ನ್ಯೂ ಜಿನಿಯಾ, ಪಾಲಿನೇಷಿಯನ್ ಮತ್ತು ಸಾಲೋಮನ್ ದ್ವೀಪಗಳು, ಫಿಜಿ ಮತ್ತು ಸಾಮಾವ ದ್ವೀಪಗಳು, ಫಿಲಿಪ್ಪೀನ್ಸ್ ದ್ವೀಪಗಳು, ಚೀನ, ಹಾಂಕ್‍ಕಾಂಗ್ ಮತ್ತು ಕ್ಯೂಕ್ಯು ದ್ವೀಪಗಳು, ಹವಾಯ್ ದ್ವೀಪ ಸೇರಿದಂತೆ ಶಾಂತಿ ಮಹಾಸಾಗರದ ಮಧ್ಯ ಭಾಗದ ದ್ವೀಪಗಳ ಕರಾವಳಿಯಲ್ಲಿ ಈ ಮೀನುಗಳು ಹಂಚಿಕೆಯಾಗಿವೆ. ಸಾಮಾನ್ಯವಾಗಿ 22 ಸೆಂ.ಮೀ. ವರೆಗೆ ಬೆಳೆಯುತ್ತವೆ. ಈ ಮೀನಿನ ಪ್ರಮುಖ ಅಹಾರ ನೀರಿನ ಮೇಲ್ಬಾಗದಲ್ಲಿ ತೇಲುವ ಫ್ಲವಕಗಳು (ಪ್ಲಾಂಕ್ಟಾನ್). ಭಾರತದ ಪಶ್ಚಿಮ ಕರಾವಳಿಯಲ್ಲಿ ಬಂಗಡೆ ಏಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಮೊಟೆಗಳನ್ನಿಡುತ್ತವೆ. ಏಳಿಂಗಮ್ ನಲ್ಲಿ (ಕೇರಳ) ಮಾಡಿದ ಅಧ್ಯಯನಗಳÀ ಪ್ರಕಾರ ಇದು ವರ್ಷದಲ್ಲಿ ಎರಡಾವರ್ತಿ, ಅಂದರೆ ನವಂಬರ್ ನಿಂದ ಮಾರ್ಚಿ ಮತ್ತು ಮೇ ಇಂದ ಆಗಸ್ಟ್ ತಿಂಗಳ ಎರಡು ಅವಧಿಗಳಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

	ಭಾರತದ ಕರಾವಳಿಯಲ್ಲಿ ರಾ. ಕನಗುರ್ತಾ ಪ್ರಭೇದವು ವಿಫುಲವಾಗಿದ್ದು. ಉಳಿದೆರಡು ಪ್ರಬೇಧಗಳು ಅಂಡಮಾನ್ ದ್ವೀಪ ಮತ್ತು ತಮಿಳುನಾಡು ದ್ವೀಪದಲ್ಲಿ ಕಂಡುಬಂದಿವೆ. ಭಾರತದ ಕಡಲ ಮೀನುಗಾರಿಕೆಯಲ್ಲಿ ಬಂಗಡೆ ಮೀನು ಅತಿ ಪ್ರಾಮುಖ್ಯದಾಗಿದೆ. ಅದರಲ್ಲೂ  ಪಶ್ಚಿಮ ಕರಾವಳಿಯಲ್ಲಿ ದಕ್ಷಿಣದ ಕನ್ಯಾಕುಮರಿಯಂದ ಉತ್ತರದ ರತ್ನಗಿರಿಯವರೆಗೆ ಈ ಮೀನುಗಳ ಪ್ರಮುಖ ಮೀನುಗಾರಿಕೆ ನೆಲೆಯಾಗಿದೆ. ಕರ್ನಾಟಕದ ಕರಾವಳಿ ಬಂಗಡೆ ಕರಾವಳಿಯೆಂದೇ ಪ್ರಸಿದ್ಧಿ. ಬಂಗಡೆ ಮೀನುಗಾರಿಕೆ ಅವಧಿ ಆಗಸ್ಟ್/ಸೆಪ್ಟಂಬರ್ ನಿಂದ ಮಾರ್ಚಿ/ಏಪ್ರಿಲ್ ವರೆಗೆ ಇದೆ. ಮಂಗಳೂರಿನಿಂದ ದಕ್ಷಿಣಕ್ಕೆ ಈ ಅವಧಿ ಆಗಸ್ಟ್/ಸೆಪ್ಟಂಬರ್ ನಿಂದ ಮಾರ್ಚಿ/ಏಪ್ರಿಲ್ ವರೆಗೆ ಇರುತ್ತದೆ. ಮಂಗಳೂರಿನಿಂದ ಉತ್ತರಕ್ಕೆ ಈ ಅವಧಿ ಸ್ವಲ್ಪ ಕಡಿಮೆಯಿದ್ದು ಅಕ್ಟೋಬರ್/ನವಂಬರ್ ನಿಂದ ಪಾರಂಭವಾಗಿ ಫೆಬ್ರವರಿ/ಮಾರ್ಚಿಯಲ್ಲಿ ಅಂತ್ಯಗೊಳ್ಳುತ್ತದೆ. ಸಾಂಪ್ರದಾಯಿಕ ಕಿವಿರು ಬಲೆಗಳಾದ, ಪಟ್ಟವಲಾ, ಐಲಚ್ಛಾಲ ವಲಾ, ಸಂಚಿ ಬಲೆಗಳಾದ ಪಟ್ಟೆನ್ ಕೊಲ್ಲಿ, ಐಲಕೊಲ್ಲಿ, ಪೈತುವಲ ಮತ್ತು ಎಳೆ ಬಲೆಯಾದ ರಂಪಣಿಗಳಿಂದ ಈ ಮೀನನ್ನು ಹಿಡಯಲಾಗುತ್ತದೆ. ಬಹು ಪಾಲು ಯಾಂತ್ರೀಕೃತ ಪರ್ಸ್‍ಸೀನ್‍ಗಳಲ್ಲಿ ಹಿಡಯಲಾಗುತ್ತದೆ. ಈ ಮೀನುಗಳು ಗುಂಪಿನಲ್ಲಿದ್ದು ಕಡಲಿನ ಮೇಲ್ಪದರದಲ್ಲಿ ಚಲಸುತ್ತಿರುತ್ತವೆಯಾದ್ದರಿಂದ ಚೀಲಬಲೆಯಾದ ಪರ್ಸ್‍ಸೀನ್ ಗಳಿಂದ ಹಿಡಿಯುವುದು ಸುಲಭ. ಈ ಮೀನಿನ ಇಳುವರಿಯಲ್ಲಿ ಸಾಕಷ್ಟು ಏರು-ಪೇರುಂಟಾಗಿತಿದ್ದು ಕರ್ನಾಟಕದ ಕರಾವಳಿಯಲ್ಲಿ 1999-2000 ದಲ್ಲಿ 30.14 ಕೋಟಿ ರೂ ಮೌಲ್ಯದ 20718 ಟನ್ ಮೀನು ಉತ್ಪದಾನೆಯಾಗಿದ್ದು 2002-03 ರಲ್ಲಿ 17.24 ಕೋಟಿ ರೂ ಮೌಲ್ಯದ 6942 ಟನ್ ಉತ್ಪಾದನೆ ಮಾತ್ರ ದಾಖಲಾಗಿದೆ. ಈ ಮೀನಿನ ಹಿಡುವಳಿಯ ಬಹುಪಾಲು ತಾಜಾ ಆಗಿ ಮಾರಾಟ ಮಾಡಲಾಗುವುದು. ಸ್ವಲ್ಪ ಪ್ರಮಾಣವನ್ನು ಒಣಗಿಸಿ ಉಪ್ಪು ಹಾಕಿ ಸಂಸ್ಕರಿಸಿ ಮಾರಾಟ ಮಾಡಲಾಗುವುದು.

 (ಸಿ.ಜಿ.ಕೆ.; ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ